ಬೆಂಡಿನ ಸಾಮಾನುಗಳು 

ಬೆಂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕಲೆ ಕರ್ನಾಟಕದಲ್ಲಿ ಪ್ರಾಚೀನಕಾಲದಿಂದಲೂ ಇದೆ. ಗುಡಿಗಾರಿಕೆಯ ಕುಶಲಕರ್ಮಿಗಳು ಬೆಂಡಿನ ಸಾಮಾನುಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರಾಗಿದ್ದು ಇವರು ಹೆಚ್ಚಾಗಿ ಸಾಗರ, ಸೊರಬ, ಶಿರಸಿ, ಕುಮಟ, ಹೊನ್ನಾವರ ಈ ಸ್ಥಳಗಳಲ್ಲಿ ಕಂಡುಬರುತ್ತಾರೆ. ಬೆಂಡಿನ ಸಾಮಾನುಗಳನ್ನು ತಯಾರಿಸಲು ಅಗತ್ಯ ಪರಿಕರಗಳೆಂದರೆ ಬೆಂಡು, ಬಣ್ಣದ ಹುಡಿ, ದಾರ, ತಂತಿ, ಬಣ್ಣದ ತಗಡು ಗಾಜಿನ ಮಣಿಗಳು ಮತ್ತು ಕಾಗದ. ಬೆಂಡಿನಿಂದ ಆಟದ ಸಾಮಾನು, ಹೂವುಗುಚ್ಚ, ಮಾದರಿಕಟ್ಟಡದ ಮನೆಗಳು, ಸರಗಳು, ಹೂದಂಡೆ, ಹೂವಿನ ತುರಾಯಿ, ಬಾಸಿಂಗ, ಟೋಪಿ ಮೊದಲಾದವನ್ನು ತಯಾರಿಸಲಾಗುತ್ತದೆ. ಹಿಂದೂ ಮದುವೆಗಳಲ್ಲಿ ಬಳಸುವ ಬಾಸಿಂಗಗಳು ಕಲಾದೃಷ್ಟಿಯಿಂದ ಉತ್ಕøಷ್ಟ ರಚನೆಗಳು. ಬಾಸಿಂಗದ ಸೌಂದರ್ಯ ಅದನ್ನು ತಯಾರಿಸುವ ಕಲ್ಪನೆ ಮತ್ತು ನಮೂನೆಯ ವಿವಿಧ ವರ್ಣದ ಕೈ ಚಳಕಗಳನ್ನು ಅವಲಂಬಿಸಿರುತ್ತದೆ. ಬೆಂಡಿನಿಂದ ತಯಾರಿಸುವ ವಿವಿಧ ಹೂಗಳು, ಹಾರಗಳು ಅತ್ಯಾಕರ್ಷಕವಾಗಿರುತ್ತವೆ. ಹಾರಗಳಲ್ಲಿ ಗುಲಾಬಿ, ಮಲ್ಲಿಗೆ, ಸೇವಂತಿಗೆಯ ಹಾರಗಳು ನೈಸರ್ಗಿಕ ಪುಷ್ಪಹಾರಗಳಂತೆ ಕಂಗೊಳಿಸುತ್ತದೆ. 

	ಕ್ರಮಬದ್ಧ ರೀತಿಯಲ್ಲಿ ಈ ಕಲೆಯನ್ನು ರೂಢಿಸಿಕೊಂಡರೆ ಇದು ಆರ್ಥಿಕವಾಗಿಯೂ ಲಾಭದಾಯಕವಾದುದು. ಆದರೆ ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಪೈಪೋಟಿಯಿಂದಾಗಿ ಬೆಂಡಿನ ಕರಕುಶಲ ವಸ್ತುಗಳ ತಯಾರಿಕೆ ಕ್ಷೀಣಿಸುತ್ತಿದೆ.    
  (ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ